ಚಿಟ್ ಮೇಳ

ಕನ್ನಡ ನಾಡಿನ ಜನಪದ ವಾದ್ಯಮೇಳಗಳಲ್ಲಿ ಒಂದು. ದಕ್ಷಿಣ ಕರ್ನಾಟಕದ ಕೆಲವು ಭಾಗಗಳಲ್ಲಿ, ಮುಖ್ಯವಾಗಿ ಹಾಸನ ಜಿಲ್ಲೆಯಲ್ಲಿ ಬಳಕೆಯಲ್ಲಿದೆ.ಉತ್ತರ ಕರ್ನಾಟಕದ ಕರಡಿ ಮಜಲು (ನೋಡಿ- ಕರಡಿಮಜಲು) ಮೇಳವನ್ನು ಇದು ಹೋಲುತ್ತದೆ. ಕಿರಿದು ಚಿಕ್ಕದು ಎಂಬ ಅರ್ಥದಲ್ಲಿ ಚಿಟ್ ಶಬ್ದದ ಬಳಕೆ. ಕರಡಿ ಮಜಲಿಗಿಂತ ಇದು ಚಿಕ್ಕದು ಎಂದು ಸಾದಿಸಲು ಆಧಾರ ಸಾಲದು. ಏಕೆಂದರೆ ಕರಡಿ ಮಜಲಿಗೆ ಸಂವಾದಿಯಾಗಿ ಅಷ್ಟೇ ಮಂದಿ ಭಾಗವಹಿಸುವ ಮೇಳವಿದು. ಇದರಲ್ಲಿ ಯಕ್ಷಗಾನ ಗೀತೆಗಳನ್ನು ವಿಶೇಷವಾಗಿ ನುಡಿಸಲಾಗುತ್ತದೆ. ಕರಡಿವಾದ್ಯವನ್ನು ಸೊಂಟಕ್ಕೆ ಕಟ್ಟಿಕೊಂಡು ಇಬ್ಬರು ಅದನ್ನು ಬಡಿಯುತ್ತ ಹಾಡಿನ ಗತಿಗೆ ತಕ್ಕಂತೆ ವಿವಿಧ ವಿನ್ಯಾಸದಲ್ಲಿ ನರ್ತಿಸುತ್ತಾರೆ. ಅವರ ನಡುವೆ ಒಬ್ಬ ಸಮೇಳವನ್ನೂ ಮತ್ತೊಬ್ಬ ಜಲ್ಲರಿಯನ್ನೂ ಬಡಿಯುತ್ತ ನರ್ತಿಸುತ್ತಾರೆ. ಶ್ರುತಿ ಮತ್ತು ನಾಗಸ್ವರ ವಾದ್ಯಗಳನ್ನು ಊದುವವರು ಮಾತ್ರ ನರ್ತಿಸುವುದಿಲ್ಲ. ಬಯಲಾಟದ ಭಾಗವತರಂತೆ ಅವರಿಬ್ಬರೂ ಹಿಂಬದಿಯಲ್ಲಿ ನಿಂತು ನೃತ್ಯಕ್ಕೆ ಬೇಕಾದ ಗೀತೆಯನ್ನು ವಾದ್ಯಗಳಿಂದ ಒದಗಿಸುತ್ತಾರೆ. ಸಾಹಿತ್ಯ, ಸಂಗೀತ, ನೃತ್ಯ ಎಲ್ಲವೂ ಇರುವುದು ಯಕ್ಷಗಾನ ಬಯಲಾಟ ಎನಿಸಿಕೊಳ್ಳುತ್ತದೆ. ಇಂಥ ದೊಡ್ಡ ಮೇಳದ ಸಂಗೀತ ಭಾಗವನ್ನು ವಾದ್ಯ ಹಾಗೂ ನೃತ್ಯಗಳಲ್ಲಿ ಮಾತ್ರ ಅನುಕರಿಸುವುದು ಚಿಕ್ಕ ಮೇಳ ಅಥವಾ ಚಿಟ್ ಮೇಳ.

	ನಿಲುವಂಗಿ, ವೀರಗಾಸೆ, ನಡುಪಟ್ಟಿ ಹಾಗೂ ಬಿಳಿಯ ರುಮಾಲು ಚಿಟ್ ಮೇಳದ ಕಲಾವಿದರ ಸಾಮಾನ್ಯ ಉಡುಪು. ಯಕ್ಷಗಾನದ ಎಲ್ಲ ಮಟ್ಟುಗಳನ್ನೂ ನಾಗಸ್ವರದಲ್ಲಿ ಮುಮ್ಮೇಳಗಾರ ತರುತ್ತಾನೆ. ತಾಳವನ್ನು ಅನುಸರಿಸಿ ಉಳಿದವರು ಹೆಜ್ಜೆ ಹಾಕುತ್ತಾರೆ. ಜನಪದ ಗೀತೆಗಳ ಮೂಲದ ಮಟ್ಟುಗಳನ್ನು ಹಿಡಿದು ವಾದ್ಯವನ್ನು ನುಡಿಸುವುದೂ ಉಂಟು. ನಾಗಸ್ವರ ಊದುವವನೇ ಇಲ್ಲಿ ಸೂತ್ರಧಾರ. ಉಳಿದವರು ಅವನ ನಾದದಂತೆ ನರ್ತಿಸುವುದು ಮಾತ್ರ. ಆದರೆ ಕರಡಿ, ಸಮೇಳಗಳನ್ನು ನಡುವಿಗೆ ಕಟ್ಟಿಕೊಂಡು ಅವನ್ನು ಕಿವಿಬಿರಿಯುವಂತೆ ಬಡಿಯುತ್ತ ಕುಣಿಯುವ ಚಳಕ ಆಶ್ಚರ್ಯಕರವಾದುದು. ಕರಡಿ ಮಜಲಿಗಿಂತಲೂ ವೇಷಕಟ್ಟಿ ಕುಣಿಯುವ ಬಯಲಾಟಕ್ಕಿಂತಲೂ ಚಿಟ್ ಮೇಳ ಅತ್ಯಂತ ಆಕರ್ಷಕ. ಜನಪದ ವಾದ್ಯ ಸಂಗೀತ ಹಿರಿಮೆಯನ್ನು ಸಾರುವ ವಿಶಿಷ್ಟ ಕಲೆ ಇದರಲ್ಲುಳಿದು ಬಂದಿದೆ.

ಚಿಟ್ ಮೇಳ ಹಬ್ಬಹರಿದಿನಗಳಲ್ಲಿ, ಜಾತ್ರೆ ಉತ್ಸವಗಳಲ್ಲಿ ನಡೆಯುತ್ತದೆ. ಗ್ರಾಮ ದೇವತೆಯ ಹಬ್ಬದಲ್ಲಿ ಸಮಗ್ರ ರಾತ್ರಿ ಜನರ ಆಸಕ್ತಿಯನ್ನು ಹಿಡಿದಿಡುವ ಆಕರ್ಷಣೆ ಈ ಮೇಳಕ್ಕಿದೆ. ಕುಣಿತದವರಲ್ಲಿ ಕುರುಬ ಜನಾಂಗದವರು ಹೆಚ್ಚಾಗಿ ಕಂಡುಬಂದಿದ್ದಾರೆ. ನಾಗಸ್ವರ, ಶ್ರುತಿಗಳಿಗೆ ಇತರರನ್ನೂ 

ಸೇರಿಸಿಕೊಳ್ಳಲಾಗುತ್ತದೆ. ಹಾಸನ ಜಿಲ್ಲೆಯ ಹಾರ್ನಳ್ಳಿಯ ಮೇಳ ತುಂಬ ಜನಪ್ರಿಯವಾದುದು. ತಿಪಟೂರು ತಾಲ್ಲೂಕು ಮತ್ತಿಹಳ್ಳಿಯಲ್ಲೂ ಮೇಳದ ಒಂದು ತಂಡವಿದೆ. ಈ ಮೇಳದ ಬಗ್ಗೆ ಇನ್ನೂ ಹೆಚ್ಚು ಸಂಶೋಧನೆ ನಡೆಯಬೇಕಾಗಿದೆ.									(ಜೆ.ಎಸ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ